Karma Siddhanta, the Law of Karma (Author: RamaMurthy)

This blog is written by Sri. RamaMurthy.

A quick preface before getting to the actual article:

Karma‘ is a Samskritha word that means action. It encompasses our thoughts, words, actions, and also others’ actions done under our instructions / influence.

There are 12 laws of Karma:

This implies everything we do created a corresponding energy that comes back to us in some form or another.

We need to work towards positive change in order to change our destiny.

I have included a few links to enlightening discourses on the topic of Karma by BrahmaKumari BK Shivani.

Now, to the actual blog…

# # # # # # # # # # # # # # # # # # # # #

“ಕರ್ಮವು (ನಾವು ಮಾಡುವ ತಪ್ಪು ಒಪ್ಪುಗಳು) ಯಾವಾಗಲೂ ತನ್ನ ವಿಳಾಸವನ್ನು ಮರೆಯುವುದಿಲ್ಲಾ, ಸರಿಯಾದ ಸಮಯಕ್ಕೆ ಮತ್ತು ಸೂಕ್ತ ಸ್ಥಳಕ್ಕೆ ಹೋಗಿ ಮುಟ್ಟಿಯೇ ತೀರುತ್ತದೆ.”
ನಮ್ಮ ಚಿಕ್ಕಮ್ಮ ಮೇಲಿನ heading ನ message ನ WhatsApp ಮಾಡಿದ್ರು. ಇದು ನಮ್ಮ group ನಲ್ಲೂ ಹರಿದಾಡಿರಬಹುದು. ಪೂರ ಓದಿ. 👇

-: ಕರ್ಮ ಸಿದ್ದಾಂತ:-

ಕಣ್ಣುಗಳು ಮರದ ಮೇಲಿನ ಮಾವಿನ ಹಣ್ಣನ್ನು ನೋಡಿದವು…. ತಿನ್ನುವ ಇಚ್ಛೆ ಜಾಗ್ರತವಾಯಿತು…. ಕಣ್ಣುಗಳೋ ಹಣ್ಣನ್ನು ಕೀಳಲಾರವು…. ಅದಕ್ಕೆ ಅಂತಲೇ ಕಾಲುಗಳು ಓಡಿದವು ಮರದ ಕಡೆಗೆ ಹಣ್ಣನ್ನು ಕೀಳಲು…. ಮರದ ಹತ್ತಿರ ಹೋದರೂ ಕಾಲುಗಳು ಕೀಳಲಾರದಾದವು ಹಣ್ಣನ್ನು……. ಆಗ ಕೈ ಮುಂದಾಗಿ ಮೇಲಕ್ಕೆ ಹೋದವು ಹಣ್ಣನ್ನು ಕೀಳಲು…. ಕೈಯಿಂದ ಕೀಳಲಾಯಿತು ಹಣ್ಣನ್ನು…. ಆದರೆ…..ಕೈ,ಕಾಲು ಮತ್ತು ಕಣ್ಣುಗಳು ಹಣ್ಣನ್ನು ತಿನ್ನಲಾಗಲಾರದಾದವು…. ಆಗ ಬಾಯಿಂದ ಹಣ್ಣನ್ನು ತಿನ್ನಲಾಯಿತು …. ಅದು ಬಾಯಿಯಲ್ಲೂ ಉಳಿಯದೆ ಹೋಯಿತು ಹೊಟ್ಟೆಯಲ್ಲಿ ಹೋಯಿತು ……

ಈಗ ತೋಟದ ಮಾಲಿ ಇದನ್ನು ನೋಡಿ, ಓಡಿ ಬಂದು ಬಡಿಗೆಯಿಂದ ಬಡಿದ ಬೆನ್ನಿಗೆ….ಬೆನ್ನು ಹೇಳಿತು… ನನ್ನನ್ನೇಕೆ ಬಡಿಯುತ್ತೀರಿ ?… ನಾನೆಲ್ಲಿ ಹಣ್ಣನ್ನು ತಿಂದೆ? ….ಬಡಿಗೆಯಿಂದ ಹೊಡೆತ ಬಿದ್ದದ್ದು ಬೆನ್ನಿಗೆ ಆದರೆ ನೀರು ಬಂದವು ಕಣ್ಣುಗಳಲ್ಲಿ… ಏಕೆಂದರೆ ಮೊದಲನೇ ತಪ್ಪು ಕಣ್ಣುಗಳದ್ದು… ಕಣ್ಣುಗಳೇ ಮೊದಲು ನೋಡಿದ್ದವು ಮಾವಿನ ಹಣ್ಣನ್ನು …!!!!!

ಇದೇ ಕರ್ಮ ಸಿದ್ಧಾಂತ….

ಕರ್ಮವು ಯಾವಾಗಲೂ ತನ್ನ ವಿಳಾಸವನ್ನು ಮರೆಯುವುದಿಲ್ಲಾ, ಸರಿಯಾದ ಸಮಯಕ್ಕೆ ಮತ್ತು ಸೂಕ್ತ ಸ್ಥಳಕ್ಕೆ ಹೋಗಿ ಮುಟ್ಟಿಯೇ ತೀರುತ್ತದೆ !!

ಇದನ್ನು ಓದಿದಾಗ, ಕರ್ಮಸಿದ್ಧಾಂತದ ಬಗ್ಗೆ ಚುಟುಕಾಗಿ ಹೇಳಿರುವುದು ಖುಷಿ ಕೊಡ್ತು.

ಹಾಗೆಯೇ,

ನನ್ನ ಮನಸ್ಸು ಕರ್ಮಸಿದ್ಧಾಂತದ ಬಗ್ಗೆಯೇ ಯೋಚಿಸ್ತಿತ್ತು. ಭಗವದ್ಗೀತೆ, ಉಪನಿಷದ್ ಗಳಲ್ಲಿ ಏನೆಲ್ಲಾ ಹೇಳಿದೆ ಎಂದು ಥಳಕು ಹಾಕ್ತಿತ್ತು. ಎಲ್ಲವನ್ನೂ ಸಮೀಕರಿಸಿದಂತೆ, ಚುಟುಕಾಗಿ ಇಲ್ಲಿ ಹೇಳಿದೆಯಲ್ಲವೇ?

ಆದಾಗ್ಯೂ, ನನ್ನ ಮನಸ್ಸು, ಕರ್ಮಸಿದ್ಧಾಂತದ ಬಗ್ಗೆ ನಾನು ಅಲ್ಲಿ,ಇಲ್ಲಿ ಅಲ್ಪಸ್ವಲ್ಪ ಓದಿದ್ದು ಮನಸ್ಸಿನಲ್ಲಿ ಹಾದುಹೋಗಕ್ಕೆ ಶುರುವಾಯ್ತು

ಎಲ್ಲವನ್ನ ಅಲ್ಲದಿದ್ದರೂ, ನನ್ನ ಗಮನಕ್ಕೆ ಬಂದಷ್ಟು ಸ್ವಲ್ಪವನ್ನಾದರೂ ಇಲ್ಲಿ ಹೇಳಬೇಕನ್ನಿಸ್ತಿದೆ. ಇದು ಎಲ್ಲವೂ ಅಲ್ಲ ಆದರೂ ಸ್ವಲ್ಪ ಪೂರಕವಾಗಿ ನೋಡಬಹುದು ಅಂತ ಹೇಳ್ತಿದೀನಿ ಅಷ್ಟೇ.

ಕರ್ಮವೆಂದರೆ ಕೆಲಸ ವೆಂಬ ಅರ್ಥವೇನೋ ಇದೆ. ಆದರೆ, ಪುನರ್ಜನ್ಮಕ್ಕೆ ಒತ್ತು ಕೊಡುತ್ತಾ, ಇದರ ಅರ್ಥ ಹಿಂದೆ ಮಾಡಿದ ನಮ್ಮ ಕರ್ಮ/ಕೆಲಸಗಳಿಂದ ಈಗ ಅನುಭವಿಸುತ್ತಿರುವ ಹಾಗೆಯೇ ಮುಂದೆ ಬರಬಹುದಾದ ಫಲ ಅಂತಲೇ ಅರ್ಥೈಸಲಾಗುತ್ತದೆ. ಅಂದರೆ, ನಾವೀಗ ಅನುಭವಿಸುತ್ತಿರಬಹುದಾದ ಸುಖ ದುಃಖ ಗಳಿಗೆ ಪೂರ್ವಜನ್ಮದ ಕರ್ಮಫಲ ಪ್ರಾಪ್ತಿ ಅಂತ ಆಗುತ್ತದೆ. “ಮಾಡಿದ್ದುಣ್ಣೋ ಮಾರಾಯ” ಅಂತಾರಲ್ಲ ಹಾಗೆ. ಹಾಗೆಯೇ, ಈ ಜನ್ಮದಲ್ಲಿ ನಾವು ಮಾಡುವ, ಕರ್ಮಫಲದಿಂದ ಮುಂದಿನ ನಮ್ಮ ಜನ್ಮ ನಿರ್ದಿಷ್ಟವಾಗುವುದೆಂದು ತಿಳಿಯಬೇಕಲ್ಲವೇ?

ಪುನರ್ಜನ್ಮ ವಿದೆಯೇ?

ನನಗಂತೂ ಗೊತ್ತಿಲ್ಲ. ಆದರೆ, ನಮ್ಮ ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಾ ಸಾಗಬೇಕೆಂದು ಅದಕ್ಕೆ ಒಂದು ಬಂಧನವೋ, ಕಟ್ಟುಪಾಡೋ ಹಾಕಿ ನಮ್ಮನ್ನು ನಿಯಂತ್ರಿಸುವಲ್ಲಿ ಈ ಕರ್ಮ ಸಿದ್ಧಾಂತ ಯಶಸ್ವಿಯಾಗಿದೆ ಅನ್ನಬಹುದಲ್ಲವೇ?

ಮಂಕುತಿಮ್ಮನ ಕಗ್ಗವೊಂದು ಜ್ಞಾಪಕಕ್ಕೆ ಬರ್ತಿದೆ –

ಮರಣದಿಂ ಮುಂದೇನು? ಪ್ರೇತವೋ? ಭೂತವೋ? ।
ಪರಲೋಕವೋ? ಪುನರ್ಜನ್ಮವೋ? ಅದೇನೂ! ।।
ತಿರುಗಿಬಂದವರಿಲ್ಲ, ವರದಿ ತಂದವರಿಲ್ಲ ।
ಧರೆಯ ಬಾಳ್ಗದಾರಿನೇ೦? ಮಂಕುತಿಮ್ಮ ।।

ಮರಣಾನಂತರ, ಪ್ರೇತ ವಾಗ್ತಿವೋ, ಭೂತವಾಗ್ತಿವೋ, ಪರಲೋಕ (ಇನ್ನೊಂದು ಲೋಕ) ಕ್ಕೆ ಹೋಗ್ತಿವೋ, ಪುನರ್ಜನ್ಮವೋ? ಅದೇನೋ! ಅಲ್ಲಿಗೆ ಹೋಗಿ ಬಂದವರಾಗಲೀ , ವರದಿ ತಂದವರಾಗಲೀ ಇಲ್ಲ. ಅದನ್ನು ಯೋಚಿಸುವುದರಿಂದ ನಮ್ಮ ಬದುಕಿಗೆ, ಬಾಳಿಗೆ ಆಗ ಬೇಕಾದ್ದೇನೂ ಇಲ್ಲ ಅಲ್ಲವೇ! – ಮಂಕು ತಿಮ್ಮ.

ಹಾಗೆಯೇ ಡಿ.ವಿ.ಜಿ. ಯವರ ಉಮರನ ಒಸುಗೆ ಯ ಒಂದು ತುಣುಕು ಜ್ಙಾಪಕಕ್ಕೆ ಬಂತು:
‘ಬರಲಿರುವುದೇನೆಂದು ಮೊದಲೆ ಬರೆದಿರಿಸಿಹುದು
ಒಳಿತನೋ ಕೆಡುಕನೋ ವಿಧಿಯ ಲೆಕ್ಕಣಿಕೆ
ನಮ್ಮ ಚಿಂತೆಗಳು ಯತ್ನಗಳೆಲ್ಲ ವಿಫಲವೋ
ಲಭ್ಯವನ್ ಅದೃಷ್ಟ ಗೊತ್ತಿರಿಸಿಹುದು ನಿನಗೆ ‘.

ಆದಾಗ್ಯೂ, ಕರ್ಮಸಿದ್ಧಾಂತ ಏನು ಹೇಳುತ್ತೆ ಅಂತ ನೋಡಿದ್ರೆ, ಕರ್ಮದಲ್ಲಿ ಮೂರು ಪ್ರಕಾರಗಳನ್ನ ಗುರುತಿಸಲಾಗಿದೆ:

  1. ಸಂಚಿತ,
  • ಪ್ರಾರಬ್ದ, ಮತ್ತು
  • ಆಗಾಮಿ

೧. ಸಂಚಿತ ಕರ್ಮವೆಂದರೆ ಹಿಂದಿನಿಂದ – ಪೂರ್ವಜನ್ಮಗಳಲ್ಲಿ ಸಂಗ್ರಹವಾದ ಕರ್ಮಗಳ ಮೊತ್ತ.

೨. ಪ್ರಾರಭ್ಧವೆಂದರೆ ಆ ಕರ್ಮಗಳು (ಸಂಚಿತ) ಫಲ ಕೊಡಲು ಆರಂಭವಾದದ್ದು ; ಈಜನ್ಮದಲ್ಲಿ ಅನುಭವಿಸುತ್ತಿರುವುದು ; ಸುಖ-ದುಃಖಗಳು ಪದವಿ, ಐಶ್ವರ್ಯ- ದಾರಿದ್ರ್ಯ ಇತ್ಯಾದಿ .

೩. ಆಗಾಮೀ ಎಂದರೆ ಉಳಿದಿದ್ದು ; ಮುಂದೆ ಅನುಭವಿಬೇಕಾದ ಕರ್ಮಫಲ ; ಹಿಂದಿನ ಜನ್ಮ ಮತ್ತು ಈ ಜನ್ಮಗಳಲ್ಲಿ ಅನುಭವಿಸಿ ಉಳಿದ ಕರ್ಮಫಲದ ಮೊತ್ತ ; ಅದು ಪ್ರತಿ ಜೀವವನ್ನೂ ಬಿಡದೆ ಹಿಂಬಾಲಿಸುತ್ತದೆ. ಇದು ಸತತ ನಡೆಯುತ್ತಿರುವುದರಿಂದ , ಜನ್ಮ ಜನ್ಮಾಂತರಳಲ್ಲಿ ಮುಂದುವರೆಯುವದರಿಂದ ಇದನ್ನು ಭವಚಕ್ರ ಎಂದು ಕರೆಯಲಾಗಿದೆ. ಇದರೀಂದ ಬಿಡುಗಡೆಯಾದರೆ ಮೋಕ್ಷ.

ಕರ್ಮಕ್ಕೆ ತಕ್ಕಫಲವೆಂದಾದರೆ, ದೇವರ ಅಗತ್ಯವಿಲ್ಲವೆಂದು ಪರಿಗಣಿಸಬಹುದೇ?

ಹಾಗಲ್ಲ, ಕರ್ಮ ಫಲವನ್ನು ಅನುಭವಿಸಿಯೇ ತೀರಬೇಕೆಂಬುದು ಸತ್ಯವಾದರೂ, ಪುಣ್ಯ ಕೆಲಸಗಳಿಂದ ಕರ್ಮ ಫಲ ಸ್ವಲ್ಪ ತಗ್ಗಬಹುದೆಂದೂ, ಒಂದು ಆಶಾ ಭಾವನೆ.

ಮತ್ತೆ, ಶ್ರುತಿ ಸ್ಮೃತಿಗಳಲ್ಲಿ , ಫಲಪ್ರಾಪ್ತಿಗಾಗಿ ಮಾಡುವ ಕ್ರಿಯಾಕಲಾಪವೆಲ್ಲವೂ ‘ಕರ್ಮ’ ಅಂತಾರೆ. ಈ ಕರ್ಮ ಶಬ್ದವನ್ನು ಧರ್ಮ ಎಂಬ ಅರ್ಥದಲ್ಲಿ ಉಪಯೋಗಿಸುವುದೂ ಉಂಟು. ಆದರೆ ಕರ್ಮವೇ ಧರ್ಮವಲ್ಲ. ಅದು ಧರ್ಮಗಳಲ್ಲಿ ಒಂದು ಅಂತ ಹೇಳ್ತಾರೆ.

ಚತುರ್ವಿಧ ಪುರುಷಾರ್ಥ (ಧರ್ಮಾರ್ಥಕಾಮಮೋಕ್ಷ) ಸಂಪಾದನಕ್ಕಾಗಿ ಮಾಡುವ ಕಾರ್ಯಗಳೆಲ್ಲಾ, ವೇದ ಸಮ್ಮತವಾದುದೆಲ್ಲ ಕರ್ಮವೇ ಅಂತ ಹೇಳುವುದೂ ಉಂಟು.

ಮತ್ತೆ ನೋಡಿ, ವಿಹಿತಕರ್ಮ ಮತ್ತು ನಿಷಿದ್ಧಕರ್ಮ ಅಂತ ಹೇಳ್ತಾ, ನಾವು ಹೇಗೆ ನಡೆದುಕೊಳ್ಳಬೇಕು ಅಂತ ಹೇಳ್ತಾರೆ. ಉದಾ – ವಿಹಿತಕರ್ಮ – ಸತ್ಯಂ ವದ, ಧರ್ಮಂ ಚರ-ಮುಂತಾದದ್ದು. ನಿಷಿದ್ಧ ಕರ್ಮ. ಉದಾ – ನ ಸುರಾಂ ಪಿಬೇತ್, ನಾನೃತಂ ವದೇತ್ -ಇತ್ಯಾದಿ. ಹೇಳ್ತಾ ಹೋದ್ರೆ ತುಂಬಾ ಇದೆ.

ಕರ್ಮವನ್ನು ಈ ರೀತಿಯಾಗಿಯೂ ವಿಭಾಗಿಸಿದ್ದಾರೆ:

  • ನಿತ್ಯ,
  • ನೈಮಿತ್ತಿಕ ಮತ್ತು
  • ಕಾಮ್ಯ

ನಿತ್ಯಕರ್ಮ: ಉದಾ – ಸಂಧ್ಯಾವಂದನೆ, ನಿತ್ಯ ಪೂಜೆ, ಜಪ, ತಪ ಇತ್ಯಾದಿ. (ಅಶಕ್ತಿ, ಖಾಯಿಲೆ ಇತ್ಯಾದಿ ಸಂದದರ್ಭಗಳಲ್ಲಿ ನಿತ್ಯಕರ್ಮ ಮಾಡದಿದ್ರೂ ದೋಷವಿಲ್ಲ ಅಂತಾನೂ ಹೇಳಿದೆ ).

ನೈಮಿತ್ತಿಕ: ಸಂದರ್ಭಾನುಸಾರ ಮಾಡಬೇಕಾದ್ದು. ಉದಾ – ಶ್ರಾದ್ಧಾದಿ ವಿಶೇಷ ಕರ್ಮಗಳು

ನೈಮಿತ್ತಿಕ ಕರ್ಮಗಳು. ಯಾವುದೇ ಸಮಾರಂಭಗಳಲ್ಲಿ ಅವಶ್ಯ ಮಾಡಬೇಕಾದ ನವಗ್ರಹ ಹೋಮ, ಮೃತ್ಹುಂಜಯ ಹೋಮ, ನಾಂದೀ ಇತ್ಯಾದಿಗಳನ್ನೂ ಸೇರಿಸ್ಕೊಬಹುದು ಅಂತ ಅನ್ಕೊಂಡಿದೀನಿ.

ಕಾಮ್ಯ: ಇದು ತಾನೇ ಹೇಳಿಕೊಳ್ಳುವಂತೆ ಫಲೋದ್ದೇಶದಿಂದ ಮಾಡುವ೦ಥದ್ದು. ಮಾಡಿದರೆ ಫಲ ದೊರೆಯ ಬಹುದು, ಮಾಡದಿದ್ರೆ ದೋಷವಂತೂ ಇಲ್ಲ.

ಹಾಗೆಯೇ,

  • ಪುಣ್ಯ ಕರ್ಮ,
  • ಪಾಪ ಕರ್ಮ, ಮತ್ತು
  • ಮಿಶ್ರ ಕರ್ಮ

ಅಂತಾನೂ ವಿಭಾಗಿಸಿದ್ದಾರೆ.

ವೇದಾಂತದಲ್ಲಿ ಪುಣ್ಯಕರ್ಮ, ಪಾಪಕರ್ಮ ಮತ್ತು ಮಿಶ್ರಕರ್ಮ ಎಂದು ಕರ್ಮವನ್ನು ಮೂರು ಬಗೆಯಾಗಿ ಹೇಳಿದೆ.

  • ಮನಸ್ಸು. ಮಾತು ಮತ್ತು ಮೈಗಳಿಂದ ಪರರಿಗೆ ಉಪಕಾರ ಮಾಡುವುದು ಪುಣ್ಯಕರ್ಮ.
  • ದುಃಖವನ್ನು ಉಂಟುಮಾಡುವುದು ಪಾಪಕರ್ಮ.
  • ಎರಡೂ ಸೇರಿದ್ದರೆ ಮಿಶ್ರವೆನಿಸುತ್ತದೆ.

ಒಟ್ಟಿನಲ್ಲಿ, ಸತ್ಕರ್ಮದಿಂದ ಪುಣ್ಯ , ದುಷ್ಕರ್ಮದಿಂದ ಪಾಪ ಎಂದಾಯಿತು.

ಫಲ ನಿರ್ಣಯ ಹೇಗೆ?

ಅದಕ್ಕೇನು ಉತ್ತರ – ಸರಳವಾಗಿ, “ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ” ಎಂದಿದೆ ಯಲ್ಲವೇ?. ಇಷ್ಟನ್ನಾದರೂ, ಅನುಸರಿಸಬಹುದಲ್ಲವೇ?

ಹೀಗೇ, ಏನೇನೋ ಮನದಲ್ಲಿ ಹಾದುಹೊದ ತರಂಗಾಂತರಂಗ. ತಪ್ಪು ಒಪ್ಪುಗಳಿರಬಹುದು. ನಾನು ಅಲ್ಲಿ ಇಲ್ಲಿ ಸ್ವಲ್ಪ ಓದಿದ್ದು, ಬರ್ದಿಟ್ಟಿದ್ದು. ಇದು ನನ್ನ ಅನಿಸಿಕೆಗೆ ಸೀಮಿತವಾದದ್ದು.

# # # # # # # # # # # # # # # # # # # # #

हरि ॐ ॐ शांति

Hari Om Om Shanthi

Leave a comment