BhagavadGita’s Tips to Face Fear

The dictionary meaning of fear is: A distressing emotion aroused by impending danger, evil, pain, etc., whether the threat is real or imagined; the feeling or condition of being afraid.

Fear is closely related to the emotion anxiety, which occurs as the result of threats that are perceived to be uncontrollable or unavoidable. Fear can be inborn (e.g., being afraid of dangerous / poisonous animals / insects is innate to us and is necessary for survival) or learned (either by witnessing or experiencing a traumatic event e.g., seeing someone almost downed in a pool can cause hydrophobia!).

Irrespective of the nature of the fear, we have to learn to deal with our phobias. A few ways of dealing with the fear would be to face it instead of trying to avoid, develop a sense of gratitude and positivity, include exercise as a part of daily routine to channelize the pent-up fear energy, etc.

Now, let us take a look at the advice that the Almighty Lord SriKrishna gives us in Srimad BhagavadGita (the Song of God) to deal with fear as explained by our respected blogger, Sri. RamaMurthy. The gist of Lord Krishna’s advice is: Constantly making the right choices and walking on the right path (by exercising our discerning power bestowed to us by the Almighty) would leave no room for fear.

(NOTE: This blog post is part of a series; please refer to BhagavadGita, The Solution Provider to access the complete series.)

  • ಅಧ್ಯಾಯ 4 ಜ್ಞಾನ ಕರ್ಮ ಸನ್ಯಾಸ ಯೋಗ, ಶ್ಲೋಕ 10 (Verse # 10 of Chapter # 4)
  • ಅಧ್ಯಾಯ 11 ವಿಶ್ವರೂಪ ದರ್ಶನ, ಶ್ಲೋಕ 50 (Verse # 50 of Chapter # 11)
  • ಅಧ್ಯಾಯ 18 ಮೋಕ್ಷ ಸನ್ಯಾಸಯೋಗ, ಶ್ಲೋಕ 30 (Verse # 30 of Chapter # 18)

ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|
ದೇ ಶೋsಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ||

ಸರ್ವೇ ಜನಾಃ ಸುಖಿನೋ ಭವಂತು | ಸರ್ವೇ ಸಂತು ನಿರಾಮಯಾಃ | 
ಸರ್ವೇ ಭಧ್ರಾಣಿ ಪಶ್ಯಂತು | ಮಾ ಕಶ್ಚಿತ್ ದುಃಖಭಾಗ್ ಭವೇತ್‌ || ||

ಕಾಲಕಾಲಕ್ಕೆ ತಕ್ಕ ಮಳೆಯಾಗಲಿ, ಇಡೀ ಭೂಮಂಡಲ ಹಸುರಿನಿಂದ ತುಂಬಿರಲಿ, ದೇಶವು ನಿಶ್ಚಿಂತೆಯಿಂದರಲಿ, ಸಮಾಜದಲ್ಲಿ ಎಲ್ಲರೂ ನಿರ್ಭಯದಿಂದಿರಲಿ
ಎಲ್ಲರೂ ಸುಖಿಗಳಾಗಲಿ, ನಿರೋಗಿಗಳಾಗಿರಲಿ, ಮಂಗಳವನ್ನೇ ಹೊಂದಲಿ, ಯಾರೊಬ್ಬರಿಗೂ ದುಃಖವಾಗದಿರಲಿ!

ಎಲ್ಲರೂ ಸುಖಿಗಳಾದಾಗ ನಾನು ಹೇಗೆ ದುಃಖಿಯಾಗಿರುತ್ತೇನೆ? ಎಲ್ಲರೊಂದಿಗೆ ನಾನೂ ಸುಖಿಯಾಗಿರುತ್ತೇನಲ್ಲವೇ! ಎಂಥ ಮಂಗಳಮಯ ಪ್ರಾರ್ಥನೆ ಭಾರತೀಯ ಋಷಿ ಮುನಿಗಳದು. ಇದನ್ನೇ ವೈಶ್ವಿಕ ಪ್ರಾರ್ಥನೆ ಎಂದು ಕರೆಯುತ್ತಾರೆ. ಒಂದು ವೇಳೆ ಎಲ್ಲರೂ ದುಃಖಿಗಳಾಗಿದ್ದರೆ ನಾನೊಬ್ಬನೇ ಸುಖವಾಗಿ ನಗುತ್ತಿರಲು ಹೇಗೆ ಸಾಧ್ಯ? ನಾನು ನಗಬೇಕಾದರೆ ನೆರೆ ಹೊರೆಯವರೆಲ್ಲರೂ ನಗುತ್ತಿರಬೇಕು. ಹೀಗಾದಾಗ ಭೂಮಿಯೇ ಪುಟ್ಟ ಸ್ವರ್ಗವಾಗುತ್ತದೆ, ಇದುವೇ ಭೂ-ಸ್ವರ್ಗ! ಎಂಥಾ ತತ್ವ, ಸತ್ವ ಅಡಗಿದೆ ಈ ಪ್ರಾರ್ಥನೆಗಳಲ್ಲಿ. ನಮ್ಮ ಪ್ರಾಚೀನ ಋಷಿ ಮುನಿಗಳಿಗೊಂದು ನಮಸ್ಕಾರ.

ನಾವು ಲೌಕಿಕರು, ಯಾವಾಗಲೂ ಸುಖವನ್ನೇ ಅಪೇಕ್ಷಿಸುವವರು. ಇದರ ಹುಡುಕಾಟದಲ್ಲಿ ಏನನ್ನೋ ಕಳೆದುಕೊಳ್ತೇವೆ, ಏನನ್ನೋ ಪಡೀತೀವಿ, ಏನೋ ಭಯ, ಆತಂಕ ಎಲ್ಲವೂ ಇದ್ದದ್ದೇ. ಈ ಭಯ ಆತಂಕ ಇದರ ನಿರ್ವಹಣೆ, ನಿರ್ಮೂಲನೆ ಬಗ್ಗೆ ಸಾಕಷ್ಟು ಪ್ರವಚನೇತ್ಯಾದಿಗಳನ್ನು ಕೇಳಿರ್ತೀವಿ, ಓದಿರ್ತೀವಿ. ಇಷ್ಟಂತೂ ನಿಜ- ಭಯ, ಆತಂಕ ಅನ್ನಿ ಇದು ನಮ್ಮ ಆತ್ಮಸ್ಥೈರ್ಯ ವನ್ನು ಕುಂದಿಸುವ, ಅನೇಕ ಕಷ್ಟ ನಷ್ಟಗಳನ್ನು, ಅಭದ್ರತೆಯನ್ನು ತಂದೊಡ್ಡುವ ವೈರಿ ಅನ್ನಬಹುದು. ಭಯ ಅನ್ನೋದು ಮಾನಸಿಕವಾಗಿಯೂ, ದೈಹಿಕವಾಗಿಯೂ ನಮ್ಮಲ್ಲಿ ಕಾಣಿಸಿಕೊಳ್ಳ ಬಹುದಾದ ಒಂದು ಸ್ಥಿತಿ ಅನ್ನಬಹುದು. (ಮಾನಸಿಕ ಭಯದ ಬಗ್ಗೆ Dr. ಕರಜಗಿ ಯವರು ಮಾರ್ಮಿಕವಾಗಿ ಒಂದು ಕಥೆ ಹೇಳ್ತಾರೆ. ತುಂಬಾನೇ ಚೆನ್ನಾಗಿದೆ. ಯಾವುದಾರೂ ಸಂದರ್ಭದಲ್ಲಿ ನೋಡೋಣ). ಶ್ರೀ ಕೃಷ್ಣಪರಮಾತ್ಮನ ಉತ್ತರವನ್ನು ಮುಂದೆ ನೋಡೋಣ.


ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ:

ನಾಲ್ಕನೇ ಅಧ್ಯಾಯದ ಬಗ್ಗೆ ಹೇಳೋದಾದ್ರೆ, ಈ ಅಧ್ಯಾಯವನ್ನು ಜ್ಞಾನ ಯೋಗ, ಜ್ಞಾನಕರ್ಮಸಂನ್ಯಾಸಯೋಗ ಅಂತ ಕರೆಯುವುದೂ ಇದೆ. DVG ಯವರು ಇದನ್ನ ನಿರ್ಲೇಪ ಕರ್ಮಯೋಗ ಅಂತ ಕರೆದಿದ್ದಾರೆ.
ಈ ಜ್ಞಾನ ಯೋಗ ಬಹಳ ಪುರಾತನ ವಾದದ್ದು ಎಂತಲೂ, ಅನೇಕ ಜ್ಞಾನಿಗಳಿಂದ ಅರ್ಥೈಸಿಕೊಂಡು, ಅನೇಕ ಬ್ರಹ್ಮರ್ಷಿಗಳಿಂದ ಪೋಷಿಸಿಕೊಂಡು ಬಂದಿದ್ದು, ಕಾಲಕ್ರಮೇಣ ಇದು ನಶಿಸಿ ಹೋಯಿತೆಂದು ಅದನ್ನು ನಿನಗೆ ಹೇಳುವುದಾಗಿ ಶ್ರೀ ಕೃಷ್ಣನು ಈ ಅಧ್ಯಾಯದಲ್ಲಿ ಹೇಳಿದ್ದಾನೆ.

ಈ ಅಧ್ಯಾಯದ ವಿಶೇಷತೆ ಅಂದ್ರೆ ಈ ಅಧ್ಯಾಯದ ಹೆಚ್ಚಿನ ಶ್ಲೋಕಗಳು, ಉಲ್ಲೇಖನೀಯ (quotable quotes) ವಾಗಿದ್ದ್ದು ಎಲ್ಲರಿಗೂ ಪರಿಚಿತವೆನಿಸುತ್ತದೆ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ . . ,
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ . . ,
ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ . . ,
ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ . . ,
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ – ಮುಂತಾದ ಶ್ಲೋಕಗಳು ಈ ಅಧ್ಯಾಯದಲ್ಲಿ ಹಾದು ಹೋಗುತ್ತವೆ.
ಶ್ಲೋಕ – 10
ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ ॥ 4.10॥

वीतरागभयक्रोधा मन्मया मामुपाश्रिता: |
बहवो ज्ञानतपसा पूता मद्भावमागता: || 4.10||

vīta-rāga-bhaya-krodhā man-mayā mām upāśhritāḥ
bahavo jñāna-tapasā pūtā mad-bhāvam āgatāḥ ||4.10||

ಅರ್ಥ: ರಾಗ-ಭಯ-ಕ್ರೋಧವನ್ನು ತೊರೆದವರು, ನನ್ನನ್ನೇ ಆಶ್ರಯಿಸಿದವರು (ನನ್ನನ್ನು ಅರಿತವರು) ಬಹಳ ಮಂದಿ ಜ್ಮಾನದ (ತಿಳಿವಿನ) ತಪಸ್ಸಿನಿಂದ ತಿಳಿಗೊಂಡು ನನ್ನನ್ನು ಸೇರಿದ್ದಾರೆ).

Meaning: Being freed from attachment, fear, and anger, becoming fully absorbed in Me, and taking refuge in Me, many persons in the past became purified by knowledge of Me, and thus they attained My divine love.


ಮೂರನೇ ಅಧ್ಯಾಯದ ಕೊನೆಯಲ್ಲಿ (ಶ್ಲೋಕ-39) ಕೃಷ್ಣ ಹೇಳಿದಂತೆ ರಾಗ ದ್ವೇಷಾದಿಗಳು ನಮ್ಮ ಪರಮ ಶತ್ರುಗಳು. ನಾವು ನಮ್ಮ ಜೀವನದ ಸರ್ವ ಸಮಸ್ಯೆಗಳಿಗೆ ಕಾರಣವಾದ ರಾಗ ದ್ವೇಷಗಳನ್ನು , ಭಯ, ಕೋಪ(ಸಿಟ್ಟು) ಇತ್ಯಾದಿಗಳನ್ನು ತೊರೆದು, ಏನು ಇದೆಯೋ ಅದರಲ್ಲಿ ಸಂತೋಷಪಡುವುದನ್ನು ಮತ್ತು ಏನು ಬಂತೋ ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡು, ಮನ್ಮಯರಾಗಬೇಕು. (‘ಮನ್ಮಯ’ ಅಂದರೆ ಜೀವನದ ಎಲ್ಲಾ ನಡೆಗಳಲ್ಲಿ ಭಗವಂತನನ್ನು ಕಾಣುವುದು ಮತ್ತು ಲೌಕಿಕ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳುವುದು).
ಭಗವಂತನ ಸತ್ಯವನ್ನರಿತು, ನಮ್ಮ ರಕ್ಷಣೆಗೆ ಸದಾ ಆತನಿದ್ದಾನೆ ಎಂದು ತಿಳಿದು ಆ ಭಗವಂತನಲ್ಲಿ ಶರಣಾದವರು ಸನ್ಮಾರ್ಗವನ್ನು ಕಾಣಬಹುದು. ನಮ್ಮ ಜೀವನದ ಪ್ರತಿಯೊಂದು ಕರ್ಮದಲ್ಲಿ ಈ ರೀತಿಯ ಭಾವನೆಯನ್ನು ಬೆಳೆಸಿಕೊಳ್ಳುವುದು ಒಂದು ತಪಸ್ಸು. ಇದರಿಂದ ನಮ್ಮ ಬದುಕು ಪವಿತ್ರವಾಗುತ್ತದೆ. ಹೀಗೆ ರಾಗ-ದ್ವೇಷದಿಂದ ಮುಕ್ತರಾದವರು ನನ್ನನ್ನು ಸೇರುತ್ತಾರೆ ಎಂದಿದ್ದಾನೆ ಕೃಷ್ಣ ಪರಮಾತ್ಮ. – ಇನ್ನೊಂದು ‘ತಪ್ಪು ಮಾಡಿದರೆ ಭಗವಂತ ನಮ್ಮನ್ನು ಕ್ಷಮಿಸೊಲ್ಲ ‘ಎನ್ನುವ ಭಯವೂ ನಮ್ಮಲ್ಲಿ ಜಾಗೃತವಾಗಿರಲಿ.

ಅಧ್ಯಾಯ 11, ಶ್ಲೋಕ – 50
ಈ ಒಂದೇ ಶ್ಲೋಕವನ್ನು ಅರ್ಥೈಸಿಕೊಳ್ಳುವುದು ಸಾಧ್ಯವಾಗದೇ ಹೋಗಬಹುದು. ಸ್ವಲ್ಪ ಹಿನ್ನೆಲೆ ಮತ್ತು ಹಿಂದಿನಶ್ಲೋಕಗಳ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಹನ್ನೊಂದನೇ ಅಧ್ಯಾಯಕ್ಕೆ ಬರುವಷ್ಟು ಹೊತ್ತಿಗೆ ಅರ್ಜುನನಿಗೆ ಮೋಹ ಹೋಗಿದೆ. ಶ್ಲೋ. ೧. ಮದನುಗ್ರಹಾಯ ಪರಮಂ . . . ಮೋಹೋ‌sಯಂ ವಿಗತೋ ಮಮ, ಈಗ ನನ್ನ ಮೋಹ ಹೋಗಿದೆ ಅಂತ ಅರ್ಜುನ ತಾನೇ ಹೇಳುವ ಮೂಲಕ ಈ ಅಧ್ಯಾಯ ಶುರುವಾಗುತ್ತೆ.
ಅರ್ಜುನನಿಗೆ, ಸ್ವಲ್ಪ ಗೊಂದಲ ಇನ್ನೂ ಇತ್ತು ಅನ್ಸುತ್ತೆ. ಒಂದುಕಡೆ ನಾನು ಸರ್ವವ್ಯಾಪಿ, ಎಲ್ಲಾಕಡೆ ನಾನೇ ಇದ್ದೀನಿ ಅಂತ ಹೇಳಿದ್ರೆ (ಅಧ್ಯಾಯ ೯), ಇನ್ನೊಂದ್ಕಡೆ ಇಲ್ಲಾ ಎಲ್ಲಾ (ಜೀವ, ಜಡ ಎಲ್ಲವು) ನನ್ನಲ್ಲೇ ಇವೆ (ಅಧ್ಯಾಯ ೧೦) ಹೇಳ್ತಾನೆ. ಹಾಗಾಗಿ ಅವನ ದಿವ್ಯರೂಪವನ್ನ ನೋಡೋಣ ಅನ್ನಿಸ್ತೇನೋ ಗೊತ್ತಿಲ್ಲ. . . . ಏವಮೇತದ್ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ | ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ – ಅಂತ ಹೇಳ್ತಾ, ನಿನ್ನ ದಿವ್ಯ ರೂಪವನ್ನು ನೋಡಬೇಕೆಂಬ ಕುತೂಹಲ ನನಗಾಗ್ತಿದೆ. ನಿನಗೆ ನನ್ನಿಂದ ನೋಡಲು ಸಾಧ್ಯವೆನಿಸಿದರೆ ತೋರಿಸು, ಅಂತ ಕೇಳ್ತಾನೆ. ಪರಮಾತ್ಮ ಅನುಗ್ರಹಿಸುತ್ತಾನೆ. ಶ್ರೀ ಕೃಷ್ಣ . . . ಪಶ್ಯ ಮೇ ಪಾರ್ಥ ರೂಪಾಣಿ ಶತಶೋ‌sಥ ಸಹಸ್ರಶಃ . ನನ್ನ ನೂರಾರು, ಸಹಸ್ರಾರು ರೂಪ ವೈವಿಧ್ಯಗಳನ್ನು, ಆದಿತ್ಯರು, ವಸುಗಳು, ರುದ್ರರಾದಿಯಾಗಿ ಸಕಲದೇವತೆಗಳನ್ನೂ ಚರಾಚರಾದಿಯಾಗಿ ಮತ್ತು ನೀನು ಏನೇನನ್ನು ನೋಡ ಬಯಸಬಹುದೋ ಎಲ್ಲವನ್ನೂ, ನನ್ನ ವಿಶ್ವರೂಪದಲ್ಲಿ ನೋಡುವೆ.
ಮುಂದುವರೆದು, ನೀನು ನಿನ್ನ (ಹೊರ) ಕಣ್ಣಿಂದ ನೋಡೋಕೆ ಅಗೋಲ್ಲಪ್ಪ ನಾನು ನಿನಗೆ ದಿವ್ಯದೃಷ್ಟಿ ಗೋಚರಿಸುವಂಥ ಬೇರೊಂದು ಕಣ್ಣನ್ನು ಕೊಡ್ತೀನಿ, ಆಗ ನೀನು ನೋಡಬಲ್ಲೆ ಅಂತ ಅನುಗ್ರಹಿಸ್ತಾನೆ. ವಿಶ್ವರೂಪ ತೋರಿಸ್ತಾನೆ. (ನಾವು 3-D film ನೋಡುವಾಗ ಬೇರೊಂದು ಕನ್ನಡಕ ಹಾಕೊಂಡ್ಹಾಗೆ ಅನ್ಕೊಳಿ )
ಮುಂದೆ, ಸಂಜಯನು ಧೃತರಾಷ್ಟ್ರನಿಗೆ ವಿವರಿಸುವಮೂಲಕ, ಅರ್ಜುನನು ಏನೇನನ್ನು ನೋಡಲು ಸಾಧ್ಯವಾಯಿತು ಎಂಬ ವಿವರಣೆ ನಮಗೆ ಸಿಗ್ತಾ ಹೋಗುತ್ತೆ. (ಇಲ್ಲೊಂದು ಜಿಜ್ಞಾಸೆ – ಸಂಜಯನಿಗೆ ಹೇಗೆ ನೋಡಲು ಸಾಧ್ಯವಾಯಿತು ಅನ್ನೋದು, -ಆತನಿಗೆ ವ್ಯಾಸಮಹರ್ಷಿಗಳು ದಿವ್ಯದೃಷ್ಟಿ ಕರುಣಿಸಿದ್ದರು ಅಂತ ಹೇಳ್ತಾರೆ. ಹಾಗೆಯೇ ಅದನ್ನು ಕಾಣುವ ಅರ್ಹತೆಯುಳ್ಳ ಎಲ್ಲರಿಗೂ ಈ ದರ್ಶನವಾಗಿತ್ತು ಅಂತ ಹೇಳುವುದೂ ಇದೆ ). ಪರಮಾತ್ಮನ ಆಗಿನ ತೇಜಸ್ಸು,ಸಹಸ್ರ ಸಹಸ್ರ ಸೂರ್ಯರು ಒಟ್ಟಿಗೆ ಉದಯಿಸಿದರೆ ಉದ್ಭವಿಸಬಹುದಾದಂಥ ಪ್ರಭೆ ಅಲ್ಲಿತ್ತು ಅಂತ ಸಂಜಯ ವಿವರಿಸ್ತಾ ಹೋಗ್ತಾನೆ. ಮುಂದುವರೆದು ಸಂಜಯ ಹೇಳ್ತಾನೆ – ಇದೆಲ್ಲವನ್ನೂ ಒಮ್ಮೆಲೇ ನೋಡಿದ ಅರ್ಜುನ ದಿಗ್ಭ್ರಾಂತನಾಗಿ, ಭಯ ಭೀತನಾಗಿ ಕೈಮುಗಿದು ಶಿರಸಾ ನಮಸ್ಕರಿಸ್ತಾ ಭಗವಂತನ ಪ್ರಾರ್ಥನೆ ಮಾಡತೊಡಗಿದ.
ಅರ್ಜುನನು, ಆಗಿನ ಅವನ ಘೋರ ರೂಪ ಮೋಡಿ ಭಯ ಭೀತನಾಗಿ – ಎಲ್ಲಕಡೆಗಳಿಂದಲೂ ನಮಸ್ಕರಿಸುತ್ತಾ ನಿನ್ನ ಈ ಘೋರ ರೂಪ ನೋಡಿದ್ದು ಸಾಕು ನಿನ್ನ ಮಾಮೂಲಿ ರೂಪವನ್ನು ತೋರಿಸು . . . ಕಿರೀಟಿನಂ ಗದಿನಂ ಚಕ್ರಹಸ್ತಮಿಚ್ಛಾಮಿ ತ್ವಾಂ ಶಂಖಚಕ್ರ ಗಧಾ ಧಾರಿಯಾದ ನಿನ್ನ ರೂಪವನ್ನು ನೋಡಲು ಬಯಸ್ತೀನಿ ಅಂತ ಹೇಳ್ದಾಗ ಭಗವಂತನು ನೀನು ನನ್ನ ಘೋರ ರೂಪವನ್ನು ನೋಡಿ ತಳಮಳಗೊಂಡಿದ್ದೀಯ ಈಗ, ನೀನು ಅಪೇಕ್ಷಿಸಿದ ರೂಪವನ್ನು ನೋಡು ಅಂತ ತನ್ನ ಶಾಂತ ಶಂಖಚಕ್ರ ಗಧಾ ಧಾರಿ ಚತುರ್ಭುಜ ರೂಪವನ್ನು ತೋರಿಸ್ತಾನೆ. ಇದನ್ನೇ ನಮ್ಮ ಮುಂದಿರುವ ಶ್ಲೋಕದಲ್ಲಿ ಹೇಳಿದೆ.

ಸಂಜಯ ಉವಾಚ
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ॥ 11.50 ॥

सञ्जय उवाच |
इत्यर्जुनं वासुदेवस्तथोक्त्वा स्वकं रूपं दर्शयामास भूय: |
आश्वासयामास च भीतमेनं भूत्वा पुन: सौम्यवपुर्महात्मा || 11.50||

sañjaya uvācha
ity arjunaṁ vāsudevas tathoktvā svakaṁ rūpaṁ darśhayām āsa bhūyaḥ |
āśhvāsayām āsa cha bhītam enaṁ bhūtvā punaḥ saumya-vapur mahātmā ||11.50||

ಅರ್ಥ: ಸಂಜಯ ಹೇಳಿದ –
–ವಾಸುದೇವ (ಶ್ರೀ ಕೃಷ್ಣ) ಹೀಗೆ ಹೇಳಿ ಹೆದರಿದ ಅರ್ಜುನನಿಗೆ ತನ್ನ ಸೌಮ್ಯ ರೂಪವನ್ನೇ (ಸ್ವಕಮ್) ಕೃಷ್ಣ ತೋರಿಸಿದ. ಕೃಷ್ಣ ಹೀಗೆ ಮರಳಿ ಸೌಮ್ಯರೂಪ ತಾಳಿ ಭಯ ಭೀತನಾಗಿದ್ದ ಅರ್ಜುನನನ್ನು ಸಂತೈಸ್ತಾನೆ.

Meaning: Sanjay said: Having spoken thus, the compassionate son of Vasudev displayed his personal (four-armed) form again. Then, he further consoled the frightened Arjun by assuming his gentle (two-armed) form.

ಅಧ್ಯಾಯ 18 ಶ್ಲೋಕ 30.
ಇಲ್ಲೂ ಸ್ವಲ್ಪ ಹಿನ್ನೆಲೆ ಬೇಕೇನೋ ಅನ್ಸುತ್ತೆ. ಇದು ಹಿಂದಿನ 17 ಅಧ್ಯಾಯಗಳ ಸಾರ ರೂಪ, 2ನೇ ಅಧ್ಯಾಯ ಪೀಠಿಕೆಯ ರೂಪದಲ್ಲಿದ್ರೆ ಇದು ಉಪಸಂಹಾರ ಅಂತ ಎಲ್ಲರ ವ್ಯಾಖ್ಯಾನ. ಓದ್ತಾ ಹೋದ್ರೆ ಎಲ್ಲಾ ಅಧ್ಯಾಯಗಳೂ ಕಣ್ಮುಂದೆ ಹಾದು ಹೋಗುತ್ತಿರುವಂತನಿಸುತ್ತದೆ.
ಹದಿನೇಳನೇ ಅಧ್ಯಾಯದ ವಿಸ್ತೃತ ರೂಪವೆಂಬಂತೆ ತ್ರಿಗುಣಗಳ ಇನ್ನಷ್ಟು ವಿವರಣೆ ನಮಗೆ ಸಿಗುತ್ತೆ.
ಅರ್ಜುನನ ಪ್ರಶ್ನೆ – ಸನ್ಯಾಸ ಹಾಗು ತ್ಯಾಗ ಇವುಗಳಲ್ಲಿನ ವ್ಯತ್ಯಾಸ, ಅಂತರವನ್ನು ತಿಳಿಸು ಎಂಬುದರೊಂದಿಗೆ ಈ ಅಧ್ಯಾಯ ಶುರುವಾಗುತ್ತೆ. ಕೃಷ್ಣ ಪರಮಾತ್ಮನ ಉತ್ತರವೂ ಚೆನ್ನಾಗಿದೆ. ಕಾಮ್ಯಕರ್ಮಗಳನ್ನ ತೊರೆದವನು ಸನ್ಯಾಸಿ. ಕಾಮ್ಯ ಅಂದ್ರೆ, ಯಾವುದನ್ನ ಮಾಡುವುದರಿಂದ ಬಯಕೆಗಳು ಪ್ರೇರಿತವಾಗುತ್ತೋ, ಮೋಹ, ಮತ್ಸರ, ಮಮಕಾರ ಗಳನ್ನ ಹುಟ್ಟಿಸುತ್ತೂ ಆ ಕರ್ಮಗಳನ್ನೇ ತ್ಯಾಗ ಮಾಡುವುದು ಅಂದ್ರೆ ಮಾಡದೇ ಇರುವುದು.
ಹಾಗೆಯೆ, ಎಲ್ಲ ಕರ್ಮಗಳನ್ನೂ ಮಾಡ್ತಾ, ಕರ್ಮದ ಫಲವನ್ನ ಬಿಡುವವನು ‘ತ್ಯಾಗಿ’. ಏನೇ ಕರ್ಮ (ಕೆಲಸ ಅನ್ನಿ ವ್ಯವಹಾರ ಅನ್ನಿ) ಮಾಡ್ದಾಗ ಫಲ ಇದ್ದೆ ಇರುತ್ತೆ. ಅಷ್ಟೂ ಇರಬಹುದು ಇಷ್ಟೂ ಇರಬಹುದು. ಫಲ ಸಿಗ್ದಲೇನೂ ಇರ್ಬಹುದು. ಆ ಫಲಾಪೇಕ್ಷೆ ಇಲ್ದಲೇ ಕರ್ಮ ಮಾಡುವವನು ತ್ಯಾಗಿ.
ಯಜ್ಞ, ದಾನ, ತಪಸ್ಸುಗಳ ಆಚರಣೆಯಿಂದ ಮನಸ್ಸು, ಪರಿಶುದ್ಧವಾಗುತ್ತೆ, ಪವಿತ್ರವಾಗುತ್ತೆ ಎಂದು ಹೇಳುತ್ತಾ ತ್ಯಾಗದಲ್ಲೂ ಸಾತ್ವಿಕ, ರಾಜಸ, ತಾಮಸ ಅಂತ ಮೂರುವಿಧ ಅಂತ ವಿವರಣಾತ್ಮಕ ವಾಗಿ ಹೇಳಿದೆ.
ಕೊನೆಗೆ ಶ್ಲೋ. ೪೦ರಲ್ಲಿ ಸಮಸ್ತ ಜೀವರಾಶಿ ತ್ರಿಗುಣಗಳ ಅಧೀನ, ಯಾವೊಂದು ಜೀವಿಯೂ ಪೂರ್ಣ ಸಾತ್ವಿಕ, ರಾಜಸ, ತಾಮಸ ವಾಗಿಯೂ ಇರುವುದಿಲ್ಲ. ಸಾತ್ವಿಕ ಗುಣವೃದ್ಧಿ ನಮ್ಮ ಕೈಯಲ್ಲಿದೆ. ಸಾತ್ವಿಕರು ದೈವಸಂಭೂತರು, ಸಾತ್ವಿಕ ರಾಜಸಿಕ ಅಂಶಿಕರು ಮನುಷ್ಯವರ್ಗ, ತಾಮಸಗುಣದವರು ರಾಕ್ಷಸವರ್ಗ. ಸಾತ್ವಿಕರು ಮೋಕ್ಷಾಕಾಂಕ್ಷಿಗಳು, ಸಾತ್ವಿಕ ರಾಜಸ ಅಂಶಪೂರಿತರು ಮೊಕ್ಷಯೋಗ್ಯರು ಹೀಗೆ ವಿವರಣೆ ಮುಂದುವರೆಯುತ್ತೆ. .
ಈಶ್ವರಃ ಸರ್ವಭೂತಾನಾಂ . . . . (ಶ್ಲೋ. ೬೧)
ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ . . . | (ಶ್ಲೋ. ೬೬) ಮುಂತಾದ ಮನನ ಯೋಗ್ಯವಾದ ಶ್ಲೋಕಗಳು ನಮಗೆ ಕಂಡು ಬರುತ್ತೆ.
ಭಗವದ್ಗೀತೆ ಶುರುವಾಗಿದ್ದು ಧೃತರಾಷ್ಟ್ರ ಮತ್ತು ಸಂಜಯರ ಪ್ರಶ್ನೋತ್ತರದಿಂದ, ಮುಕ್ತಾಯವೂ ಸಂಜಯನಿಂದ. ಫಲಶೃತಿಯೂ ಸಂಜಯನಿಂದ.
“ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ” || 78 ||
ನಮ್ಮ ಮುಂದಿರುವ ಶ್ಲೋಕಭಗವನ್ನು ನೋಡೋಣ –


ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ ।
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥18.30॥

प्रवृत्तिंच निवृत्तिं च कार्याकार्ये भयाभये |
बन्धं मोक्षं च या वेत्तिबुद्धि: सा पार्थ सात्त्विकी || 18.30||

pravṛittiṁ cha nivṛittiṁ cha kāryākārye bhayābhaye |
bandhaṁ mokṣhaṁ cha yā vetti buddhiḥ sā pārtha sāttvikī ||18.30||

ಅರ್ಥ: ಪಾರ್ಥ, ಏನು ಮಾಡಬೇಕು (ಕರ್ಮಮಾರ್ಗ, ಇಹದ ಧರ್ಮ – ಪ್ರವೃತ್ತಿ), ಏನನ್ನು ಮಾಡಬಾರದು (ನಿವೃತ್ತಿ) ಯಾವುದಕ್ಕೆ ನಾವು ಭಯಪಡಬೇಕು ಮತ್ತು ಯಾವುದಕ್ಕೆ ಭಯಪಡಬಾರದು, ಯಾವುದು ನಮ್ಮನ್ನು ಬಂಧಿಸಿಡುತ್ತದೆ, ಯಾವುದು ಬಿಡುಗಡೆ ಮಾಡುತ್ತದೆ (ಮೋಕ್ಷಕ್ಕೆ ದಾರಿ ತೋರಿಸುತ್ತದೆ) ಎನ್ನುವುದನ್ನು ತಿಳಿಸಿಕೊಡುವ ಬುದ್ಧಿ ಸಾತ್ವಿಕ. ಮುಂದಿನ ಶ್ಲೋಕಗಳಲ್ಲಿ, ಮೇಲೆ ಹೇಳಿದ ವ್ಯತ್ಯಾಸಗಳನ್ನ ತಿಳಿದೇ ಹೋದ್ರೆ ಅದು ರಾಜಸ ಗುಣ ವಾಗುತ್ತೆ, ವ್ಯತಿರಿಕ್ತವಾಗಿ, ವಿರುದ್ಧವಾಗಿ ಹೋದ್ರೆ ಅದು ನಮ್ಮ ತಾಮಸಗುಣವಾಗುತ್ತೆ ಅನ್ನುವ ಕೂಲಂಕಷ ವಿವರಣೆ ಇದೆ.

Meaning: The intellect is said to be in the nature of goodness, O Parth, when it understands what is proper action and what is improper action, what is duty and what is non-duty, what is to be feared and what is not to be feared, what is binding and what is liberating.

ಇದು ಪದ ಪದಾರ್ಥ, ಅದರ ಭಾವಾರ್ಥ ಮಾಡ್ಕೋತ ಹೋಗ್ಬೇಕು, (ಶ್ರವಣ, ಮನನ, ನಿಧಿಧ್ಯಾಸನ). ಡಿವಿಜಿ ಯವರು ಹೇಳುವಂತೆ, ಪ್ರವೃತ್ತಿ ಮಾರ್ಗ ಅಂದ್ರೆ ‘ಕರ್ಮ ಮಾರ್ಗ – ಗೃಹಸ್ಥ ಮಾರ್ಗ, ನಮ್ಮ ದಿನ ನಿತ್ಯದ ಎಲ್ಲಾ ಲೌಕಿಕ, ವ್ಯಾವಹಾರಿಕ ವ್ಯಾಪಾರ ವೆಲ್ಲವೂ ಕರ್ಮವೇ ಅಲ್ದೆ ಚತುರ್ವಿಧ ಪುರುಷಾರ್ಥ ಅಂತ ಏನು ಹೇಳ್ತಾರೋ ಅದಕ್ಕೆ ಪೂರಕವೂ ಹೌದು. ನಿವೃತ್ತಿ ಮಾರ್ಗ’ ಅಂದ್ರೆ ಸಂನ್ಯಾಸ ಮಾರ್ಗ. ಎಲ್ಲರೂ ಸಂನ್ಯಾಸ ಸ್ವೀಕರಿಸುವುದೇ ಆದ್ರೆ, ಪ್ರಪಂಚ ನಡೆಯುವುದು ಹೇಗೆ?. ನೋಡಿ, ನಾವು ಲೌಕಿಕರು, ಎಲ್ಲವನ್ನೂ ಬಿಟ್ಟು ಸಂನ್ಯಾಸಿ ಆಗೋಕೆ ಸಾಧ್ಯವಿಲ್ಲ. ಪ್ರವೃತ್ತಿ ನಿವೃತ್ತಿ ಗಳ ಸಮನ್ವಯವೇ ನಮ್ಮ ಬದುಕಾಗಬೇಕು. ಸುಖ ಭೋಗಗಳೇ ದೊಡ್ಡದು ಅಂದ್ಕೊಳ್ದೇ, ಸ್ವಾರ್ಥತೆಯನ್ನು, ಅಹಂಕಾರ ಮಮಕಾರ ಗಳನ್ನೂ ಕಡಿಮೆ ಮಾಡ್ಕೊಳ್ತಾ ಸಂತೋಷದಿಂದಿರಬೇಕು. ಪ್ರವೃತ್ತಿ-ನಿವೃತ್ತಿ, ಸ್ವಾರ್ಥ-ವಿರಕ್ತಿಗಳ ಸಮನ್ವಯದೊಂದಿಗೆ, ಜೊತೆಗೂಡಿ ಬಾಳುವುದಾದ್ರೆ ನಾವೂ ಯೋಗಿಗಳು, ತ್ಯಾಗಿಗಳೇ. ನಾವು ಚೆನ್ನಾಗಿ ಬದುಕಿ ಬಾಳುವುದನ್ನು ಕಲಿತರೆ, ಅಳವಡಿಸಿಕೊಂಡೆವಾದರೆ, ಅದುವೇ ಆತ್ಮ ಸಾಕ್ಷಾತ್ಕಾರಕ್ಕೂ ದಾರಿಯಾಗಬಹುದಲ್ಲವೇ?.

ಓಂ ಶ್ರೀ ಕೃಷ್ಣ ಪರಮಾತ್ಮನೇ ನಮ:

- - - ==ooOoo==- - -

One thought on “BhagavadGita’s Tips to Face Fear

Leave a comment